ರಾಜಕುಮಾರಿ ಶಶಿಬಾಲ | Queen Shashibala | Vikramaditya Stories

ವಿಕ್ರಮಾದಿತ್ಯ ರಾಜನು ಅರಳಿ ಮರದ ಬುಡದಲ್ಲಿ ನಿಂತು ಬೇತಾಳನನ್ನು ಭುಜದ ಮೇಲೆ ಹಾಕಿಕೊಂಡು ನಿಶ್ಶಬ್ದವಾಗಿ ತನ್ನ ರಾಜಧಾನಿಯ ಕಡೆಗೆ ಹೆಜ್ಜೆ ಹಾಕತೊಡಗಿದ. ಆದರೆ ಭುಜದ ಮೇಲೆ ಇರುವ ಬೇತಾಳ ಸುಮ್ಮನಿರಬೇಕಲ್ಲ? ಬೇತಾಳನು ರಾಜನನ್ನು ಮಾತನಾಡಿಸಲು ಯತ್ನಿಸಿದನು.


     "ರಾಜಾ ವಿಕ್ರಮಾದಿತ್ಯ! ನೀನು ಹೀಗೆ ಸುಮ್ಮನೆ ದಾರಿ ನಡೆದರೆ ನನಗೆ ಬೇಸರ ಕಳೆಯುವ ದಾರಿ ಯಾವುದು? ನಾನು ನಿನಗೆ ಒಂದು ಸುಂದರವಾದ ಕಥೆಯನ್ನು ಹೇಳುವೆನು. ಕಥೆಯನ್ನು ಏಕಾಗ್ರತೆಯಿಂದ ಕೇಳಿಸಿಕೋ. ಹಾಗೆಯೇ ನಾನು ಕೇಳಿದ ಪ್ರಶ್ನೆಗಳಿಗೆ ಸತ್ಯವಾಗಿ ಉತ್ತರಿಸಬೇಕು. ನಿನ್ನ ಉತ್ತರ ತಪ್ಪಾಗಿದ್ದರೆ ನಿನ್ನ ತಲೆ ಒಡೆದು ನೂರು ಚೂರಾಗುವುದು ಖಂಡಿತ".

     ರಾಜನು ಮೌನವಾಗಿ ತಲೆ ಅಲ್ಲಾಡಿಸಿದನು. ಬೇತಾಳನು ತಾನು ಹೇಳಬೇಕೆಂದು ಬಯಸಿದ ಕಥೆಯನ್ನು ನಿಧಾನವಾಗಿ ಪ್ರಾರಂಭ ಮಾಡಿತು. "ರಾಜಾವಿಕ್ರಮ! ಹಿಂದೆ ಆವಂತಿ ರಾಜನಿಗೆ ಶಶಿಬಾಲ ಎಂಬ ಅದ್ಭುತವಾದ ಸುಂದರಿ ಮಗಳಾಗಿದ್ದಳು. ಅವಳು ಸುಂದರಿ ಮಾತ್ರವಲ್ಲ ಅತ್ಯಂತ ಜಾಣೆ ಎನಿಸಿಕೊಂಡಿದ್ದಳು. ಸುತ್ತಮುತ್ತಲಿನ ರಾಜರಿಗೆ ಅವಳ ಸೌಂದರ್ಯ ವಿವರಣೆ ಹಾಗೂ ಬುದ್ಧಿಮತ್ತೆಯ ಬಗ್ಗೆ ಕೇಳಿ ತಾವು ಹೇಗಾದರೂ ಮಾಡಿ ರಾಜಕುಮಾರಿಯನ್ನು ವಿವಾಹವಾಗಬೇಕು ಎಂಬ ಬಯಕೆ ಮೂಡಿತು. ಅವಳನ್ನು ವಿವಾಹವಾಗಲು ಅಕ್ಕಪಕ್ಕದ ರಾಜಕುಮಾರರು ಕಾತುರದಿಂದ ಕಾಯುತ್ತಿದ್ದರು. ಶಶಿಬಾಲಳನ್ನು ವಿವಾಹವಾಗಲು ರಾಜಕುಮಾರರು ಅಭಿಲಾಷೆಯಿಂದ ಸಮಯಕ್ಕಾಗಿ ಕಾಯುತ್ತಿದ್ದರು.


storieskannada1


     ಒಂದು ದಿನ ಆವಂತಿ ದೇಶದ ರಾಜನು ತನ್ನ ಅಂತಃಪುರದಲ್ಲಿ ರಾಜ ದರ್ಬಾರನ್ನು ನಡೆಸುತ್ತಿದ್ದನು. ಕಾವಲು ಭಟನು ಒಂದು ಪತ್ರವನ್ನು ತಂದು ರಾಜನ ಕೈಗೆ ನೀಡಿದನು. ಅದು ಚೋಳ ದೇಶದ ರಾಜಕುಮಾರನು ಅವಂತಿ ದೇಶದ ರಾಜ ದರ್ಬಾರಿಗೆ ಬಂದಿರುವ ವಿಷಯ ತಿಳಿಸುವ ಪತ್ರವಾಗಿತ್ತು. ರಾಜನು ಆಧಾರದಿಂದ ಚೋಳ ದೇಶದ ರಾಜಕುಮಾರನನ್ನು ಬರಮಾಡಿಕೊಂಡನು. ಚೋಳ ದೇಶದ ರಾಜಕುಮಾರನು ವಿನಯದಿಂದ ರಾಜನಿಗೆ ವಂದಿಸಿ ತನ್ನ ಮಾತುಗಳನ್ನು ಹೇಳಿದನು. "ಮಹಾರಾಜ! ನಾನು ನಿನ್ನ ಪುತ್ರಿ ರಾಜಕುಮಾರಿ ಶಶಿಬಾಲಳನ್ನು ವಿವಾಹವಾಗಲು ಇಚ್ಛಿಸಿ ಬಂದಿರುವೆನು. ನಾನು ಬಿಲ್ಲನ್ನು ಬಿಡುವುದರಲ್ಲಿ ತುಂಬಾ ನಿಷ್ಣಾತನೆನಿಸಿರುವೆ. ನಾನು ಕಣ್ಣು ಕಟ್ಟಿಕೊಂಡು ಬೇಕಾದರೂ ಹಸುವಿನ ಕಣ್ಣಿಗೆ ಗುರಿ ತಪ್ಪದಂತೆ ಬಾಣ ಬಿಡಬಲ್ಲೆ".

     "ರಾಜಕುಮಾರ! ನಿನ್ನ ಮಾತುಗಳು ಹಾಗೂ ಶೌರ್ಯ, ಪರಾಕ್ರಮವನ್ನು ಕೇಳಿ ಸಂತಸವಾಗಿದೆ. ನೀನು ನನ್ನ ಅರಮನೆಯಲ್ಲಿ ಅತಿಥಿಯಾಗಿ ತಂಗು. ನಾನು ನನ್ನ ಮಗಳನ್ನು ವಿಚಾರಿಸಿ ವಿವಾಹ ವಿಷಯವನ್ನು ನಿಷ್ಕರ್ಷೆ ಮಾಡುವೆನು". ಚೋಳ ರಾಜಕುಮಾರ ಸಂತಸದಿಂದ ಒಪ್ಪಿಕೊಂಡು ಅರಮನೆಯಲ್ಲಿ ಅತಿಥಿಯಾಗಿ ಉಳಿದನು.

     ಮರುದಿನ ವೈಶಾಲಿ ದೇಶದ ರಾಜಕುಮಾರನು ಆವಂತಿ ರಾಜ ದರ್ಬಾರಿಗೆ ಆಗಮಿಸಿದನು. ಅವನು ತನ್ನನ್ನು ತಾನು ರಾಜನಿಗೆ ಪರಿಚಯಿಸಿಕೊಂಡನು. "ಮಹಾರಾಜ! ನಾನು ವೈಶಾಲಿ ದೇಶದ ರಾಜಕುಮಾರನು. ನಾನು ನಿನ್ನ ಮಗಳು ಶಶಿಬಾಲಳನ್ನು ವಿವಾಹವಾಗಲು ಇಚ್ಛಿಸಿ ಇಲ್ಲಿಗೆ ಬಂದಿರುವೆನು. ಪ್ರತಿಯೊಬ್ಬರಿಗೂ ಒಂದೊಂದು ವಿದ್ಯೆ ಗೊತ್ತಿರಲೇಬೇಕು. ನನಗೆ ಬಟ್ಟೆಗಳನ್ನು ನೇಯಲು ಬರುವುದು. ನಾನು ರೇಷ್ಮೆ ವಸ್ತ್ರಗಳನ್ನು ಅತ್ಯಂತ ಕುಶಲತೆಯಿಂದ ನೇಯುವೆನು. ತಾನು ನೇಯ್ದ ಬಟ್ಟೆಗಳನ್ನು ಸಾವಿರಾರು ರೂಪಾಯಿ ಕೊಟ್ಟು ಜನರು ಕೊಳ್ಳುವರು. ನಾನು ಬಂದ ಹಣದಲ್ಲಿ ಅರ್ಧ ಹಣವನ್ನು ನನಗಾಗಿ ಉಳಿಸಿಕೊಂಡು ಉಳಿದರ್ದ ಹಣವನ್ನು ಬಡವರಿಗೆ ದಾನ ಮಾಡುವೆನು".

     ತಾನು ತಂದ ಒಂದು ರೇಷ್ಮೆ ವಸ್ತ್ರವನ್ನು ರಾಜನಿಗೆ ವೈಶಾಲಿ ದೇಶದ ರಾಜಕುಮಾರನು ಕಾಣಿಕೆಯಾಗಿ ನೀಡಿದನು. ಆವಂತಿ ರಾಜನು ಆನಂದದಿಂದ ವಸ್ತ್ರವನ್ನು ಸ್ವೀಕರಿಸಿ ಬಂದ ರಾಜಕುಮಾರನನ್ನು ಆತ್ಮೀಯವಾಗಿ ಸತ್ಕರಿಸಿದನು. ಅವನನ್ನು ಅರಮನೆಯಲ್ಲಿ ಕೆಲವು ದಿನಗಳ ಕಾಲ ಅತಿಥಿಯಾಗಿ ಉಳಿಸಿಕೊಳ್ಳುವಂತೆ ಹೇಳಿದನು. ರಾಜಕುಮಾರನು ಸಂತೋಷದಿಂದ ಅರಮನೆಯಲ್ಲಿ ಅತಿಥಿಯಾಗಿ ಉಳಿದುಕೊಳ್ಳಲು ಸಮ್ಮತಿ ನೀಡಿದನು. ಮರುದಿನ ಪಕ್ಕದ ದೇಶದ ರಾಜಕುಮಾರನೊಬ್ಬನ್ನು ಬಂದು ತಾನು ಶಶಿಬಾಲಳನ್ನು  ವಿವಾಹವಾಗಲು ಇಚ್ಛಿಸುವುದಾಗಿ ಹೇಳಿದನು.

     "ಮಹಾರಾಜ! ನಾನು ಒಬ್ಬ ಜ್ಞಾನಿ. ನಾನು ಅಪಾರವಾದ ಜ್ಞಾನಸಂಪತ್ತನ್ನು ಹೊಂದಿರುವೆನು. ನನಗೆ ವೇದ ಮತ್ತು ಉಪನಿಷತ್ತುಗಳ ಬಗ್ಗೆ ತಿಳಿದಿದೆ. ನೀವು ಯಾವುದೇ ಪ್ರಶ್ನೆಯನ್ನು ಕೇಳಿದರು ಕ್ಷಣದಲ್ಲಿ ಉತ್ತರ ನೀಡುವೆನು. ನನಗೆ ನಿಮ್ಮ ಪುತ್ರಿಯನ್ನು ಕೊಟ್ಟು ವಿವಾಹ ಮಾಡು".

     ರಾಜನಿಗೆ ಸಂಧಿಗ್ಧ. ತನ್ನ ಮಗಳನ್ನು ವಿವಾಹವಾಗಲು ಒಬ್ಬರಲ್ಲ, ಇಬ್ಬರಲ್ಲ ಮೂವರು ಕೇಳಿಕೊಂಡು ಬಂದಿದ್ದಾರೆ ಎಂದು ಯೋಚಿಸುತ್ತಿರುವಾಗಲೇ ನೆರೆಯ ರಾಜಕುಮಾರನು ಬಂದಿರುವುದಾಗಿ ಕಾವಲುಗಾರನು ತಿಳಿಸಿದನು. ಬಂದ ರಾಜಕುಮಾರನನ್ನು ಗೌರವದಿಂದ ಕರೆದುಕೊಂಡು ಬರುವಂತೆ ರಾಜನು ಆಜ್ಞಾಪಿಸಿದನು. ರಾಜನಲ್ಲಿಗೆ ಬಂದ ರಾಜಕುಮಾರನು ವಿನಯದಿಂದ ನಮಸ್ಕರಿಸಿದನು.

     "ಮಹಾರಾಜ! ನಾನು ನಿನ್ನ ನೆರೆಯ ರಾಜ್ಯದ ರಾಜಕುಮಾರ. ನನಗೆ ನಿನ್ನ ಮಗಳನ್ನು ವಿವಾಹ ಮಾಡಿಕೊಡು ಎಂದು ಕೇಳಲು ಬಂದಿರುವೆನು. ನಾನು ತುಂಬಾ ಕರುಣೆಯ ಸ್ವಭಾವದವನು. ನನಗೆ ಪಶು, ಪ್ರಾಣಿ, ಪಕ್ಷಿಗಳ ಭಾಷೆಯನ್ನು ಅರ್ಥಮಾಡಿಕೊಳ್ಳುವ ಚತುರತೆ ಇದೆ. ಇದೇ ನನ್ನ ವೃತ್ತಿಯಾಗಿ ಮಾಡಿಕೊಂಡಿವೆ. ನನಗೆ ಪ್ರಾಣಿ ದಯೆ ಜಾಸ್ತಿ".

     ಆವಂತಿ ದೇಶದ ರಾಜನಿಗೆ ತನ್ನ ಮಗಳ ವಿವಾಹದ ಬಗ್ಗೆ ಮತ್ತಷ್ಟು ಗೊಂದಲ ಉಂಟಾಯಿತು. ಬಂದ ರಾಜಕುಮಾರನನ್ನು ಅತಿಥಿಯಾಗಿ ಉಳಿದುಕೊಳ್ಳಲು ಅತಿಥಿ ಗೃಹಕ್ಕೆ ಕರೆದುಕೊಂಡು ಹೋದನು. ತಾನು ತನ್ನ ಮಗಳ ಜೊತೆ ವಿಚಾರಣೆ ಮಾಡಿದ ನಂತರ ವಿವಾಹದ ವಿಷಯವನ್ನು ತಿಳಿಸುವುದಾಗಿ ಹೇಳಿದನು. ರಾಜಕುಮಾರನು ಆಗಲಿ ಎಂಬಂತೆ ತಲೆ ಅಲ್ಲಾಡಿಸಿದನು.

     ರಾಜನು ತನ್ನ ಪುತ್ರಿಯ ಶಶಿಬಾಳನ ಜೊತೆ ವಿವಾಹದ ವಿಷಯವನ್ನು ಕೂಲಂಕಷವಾಗಿ ಚರ್ಚಿಸಿದನು. ಮರುದಿನ ತನ್ನ ಕುಮಾರಿಯ ಸಮೇತ ಅರಮನೆ ಉದ್ಯಾನವನಕ್ಕೆ ಬಂದನು. ಬಂದಿರುವ ನಾಲ್ಕು ದೇಶದ ರಾಜಕುಮಾರರನ್ನು ಕರೆ ಕಳುಹಿಸಿದನು.

     "ರಾಜಾ ವಿಕ್ರಮ! ಈಗ ನೀನು ನಿನ್ನ ಮೌನವನ್ನು ಮುರಿದು ನನ್ನ ಪ್ರಶ್ನೆಗೆ ಉತ್ತರಿಸು. ರಾಜಕುಮಾರಿ ಶಶಿಬಾಲ ಯಾರನ್ನು ವಿವಾಹವಾದಳು. ನೀನು ನನ್ನ ಪ್ರಶ್ನೆಗೆ ಉತ್ತರಿಸದಿದ್ದರೆ ನಿನ್ನ ತಲೆ ಸಾವಿರ ಹೋಳಾಗುವುದು ಖಚಿತ".

     ವಿಕ್ರಮನೂ ಬೇತಾಳನನ್ನು ಹೊತ್ತು ದಾರಿ ಸಾಗುತ್ತ ಕಥೆ ಕೇಳುತ್ತಿದ್ದನೇ ವಿನಃ ಒಂದೇ ಒಂದು ಮಾತನ್ನು ಆಡಿರಲಿಲ್ಲ. ಅವನು ತನ್ನ ಮೌನವನ್ನು ಮುರಿದು ಮಾತನಾಡಲು ಪ್ರಾರಂಭಿಸಿದನು.

     "ಬೇತಾಳವೇ ! ಯಾವುದೇ ವ್ಯಕ್ತಿಯನ್ನು ನಾವು ಗುರುತಿಸುವುದು ಅವರ ವೃತ್ತಿಯಿಂದ ಎಂದು ಹೇಳಬಹುದು. ರಾಜಕುಮಾರಿ ಶಶಿಬಾಲ ಚೋಳ ದೇಶದ ರಾಜಕುಮಾರನನ್ನು ವಿವಾಹವಾದಳು. ರಾಜಕುಮಾರಿ ತನ್ನನ್ನು ರಕ್ಷಿಸಲು ಬಿಲ್ಲು ವಿದ್ಯೆಯಲ್ಲಿ ನಿಪುಣನಾದವನನ್ನು ಆರಿಸಿಕೊಂಡಳು. ಆಯುಧಗಳನ್ನು, ಬಿಲ್ಲುಬಾಣಗಳನ್ನು ಹೂಡುವವನು ಕ್ಷತ್ರಿಯ. ರಾಜನಾದವನಿಗೆ ಕ್ಷತ್ರಿಯ ಗುಣ ಇರಬೇಕು. ವೈಶಾಲಿ ದೇಶದ ರಾಜನು ವೈಶ್ಯ ಕುಲದವನು. ಅವನು ರೇಷ್ಮೆ ವಸ್ತ್ರಗಳನ್ನು ಮಾರಿ ಜೀವನ ನಡೆಸುವವನು. ಹಾಗೆ ಮೂರನೆಯವನು ಬ್ರಾಹ್ಮಣ. ಅವನು ಅಪಾರವಾದ ಜ್ಞಾನ ಸಂಪತ್ತನ್ನು ಹೊಂದಿದ್ದಾನೆ. ನಾಲ್ಕನೆಯವನು ಶೂದ್ರ. ಅವನು ಪಶು, ಪ್ರಾಣಿಗಳ ಭಾಷೆಯನ್ನು ಕರಗತ ಮಾಡಿಕೊಂಡವನು. ರಾಣಿಗೆ ತನ್ನ ದೇಶವನ್ನು ಕಾಪಾಡಲು ಕ್ಷತ್ರಿಯ ಬೇಕು. ಹೀಗಾಗಿ ಶಶಿಬಾಲ ಚೋಳ ದೇಶದ ರಾಜಕುಮಾರನನ್ನೇ ವಿವಾಹವಾದಳು".

     ಬೇತಾಳವು ಸಂತೋಷದಿಂದ ವಿಕ್ರಮನನ್ನು ಅಭಿನಂದಿಸಿತು. "ರಾಜಾ ! ನಾನು ನಿನ್ನ ಉತ್ತರದಿಂದ ಸಂತುಷ್ಟನಾಗಿರುವೆನು. ನೀನು ನನ್ನ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಿರುವೆ. ನೀನು ಮೌನ ಮುರಿದ ನಂತರವೂ ನಾನು ನಿನ್ನ ಭುಜದ ಮೇಲೆ ಇದ್ದರೆ ಸರಿಯಲ್ಲ. ನಾನು ನನ್ನ ವಾಸಸ್ಥಾನವನ್ನು ಸೇರಿಕೊಳ್ಳುವೆ.

     ರಾಜನು ನೋಡುತ್ತಿರುವಾಗಲೇ ಭುಜದ ಮೇಲೆ ಇದ್ದ ಬೇತಾಳನು ಸನಿಹದಲ್ಲಿರುವ ಅರಳಿ ಮರದ ಮೇಲೆ ಹೋಗಿ ಕುಳಿತುಕೊಂಡಿತು. ರಾಜನ ಸಂತಸದಿಂದ ತನ್ನ ರಾಜಧಾನಿಯ ಕಡೆಗೆ ಹೆಜ್ಜೆ ಹಾಕಿದನು. ಬೇತಾಳ ಕೇಳಿದ ಪ್ರಶ್ನೆ ಉತ್ತರಿಸಿದ ರಾಜನ ತಲೆ ಉಳಿಯಿತು. ಬೇತಾಳವು ಸಹ ರಾಜನ ಭುಜದಿಂದ ಹಾರಿ ತನ್ನ ವಾಸಸ್ಥಾನವಾದ ಅರಳಿಮರವನ್ನು ಸೇರಿಕೊಂಡಿತು.

ಇದೇ ರೀತಿಯ ಇನ್ನಷ್ಟು ಕಥೆಗಳನ್ನು ಓದಲು, ಅಪ್ಡೇಟ್ಸ್ ಪಡೆಯಲು, ನಮ್ಮನ್ನು Instagramನಲ್ಲಿ ಫಾಲೋ ಮಾಡಿ.

Post a Comment

0 Comments