Preface

ಮುಲ್ಲಾ ನಸ್ರುದ್ದೀನ್


ಟರ್ಕಿ ತುಂಬಾ ಸುಂದರವಾದ ದೇಶ. ಹಾಗೆಯೇ ಟರ್ಕಿ ತುಂಬಾ ಅದ್ಭುತವಾದ ನಾಡು. ಅದು ಕಲೆ ಮತ್ತು ಸಂಸ್ಕೃತಿಯ ಬೀಡು. ಅಂತಹ ಸುಸಂಸ್ಕೃತ ನಾಡಿನಲ್ಲಿ ಒಬ್ಬ ವ್ಯಾಪಾರಿ ವಾಸಿಸುತ್ತಿದ್ದನು. ಅವನು ತುಂಬಾ ಶ್ರೀಮಂತ ಮತ್ತು ಖ್ಯಾತಿವಂತನೆಂದು ಹೆಸರು ಗಳಿಸಿರಲಿಲ್ಲ. ಅವನು ಒಳ್ಳೆಯ ಮನುಷ್ಯ, ಪ್ರಾಮಾಣಿಕ, ತಾನು ಕಷ್ಟಪಟ್ಟು ಕೆಲಸ ಮಾಡುತ್ತಿದ್ದನು. ಅವನ ಸುತ್ತ ಮುತ್ತಲಿನ ಜನ ವ್ಯಾಪಾರಿಯನ್ನು ತುಂಬಾ ಪ್ರೀತಿಸಿ ಗೌರವಿಸುತ್ತಿದ್ದರು. ಅವನು ಹೆಚ್ಚು ಅಧ್ಯಯನ ಮಾಡಿ ಜ್ಞಾನಿ ಎಂದು ಕರೆಸಿಕೊಂಡಿದ್ದವನು. ಇಂದು ಅವನು ಶ್ರೀಮಂತನಾಗಿಲ್ಲದಿದ್ದರೂ ಮುಂದೆ ಒಂದು ದಿನ ಅವನ ಬುದ್ದಿವಂತಿಕೆ ಜ್ಞಾನದಿಂದ ತನ್ನ ಸಂಸಾರಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟವನು.


Mullanasaruddin Stories


     ಇಂತಹ ಪ್ರಾಮಾಣಿಕ, ಬುದ್ಧಿವಂತ ವ್ಯಾಪಾರಿಗೆ ಪತ್ನಿ ಹಾಗೂ ಒಬ್ಬ ಮಗನೂ ಇದ್ದರು. ಆ ಮಗನ ಹೆಸರು ನಸ್ರುದ್ದೀನ್. ದಂಪತಿಗಳು ತಮ್ಮ ಪ್ರೀತಿಯ ಪುತ್ರನನ್ನು "ನಸ್ರು" ಎಂದು ಕರೆಯುತ್ತಿದ್ದರು. ವ್ಯಾಪಾರಿಯು ತನ್ನ ಮಗನನ್ನು ತುಂಬಾ ಪ್ರೀತಿಸುತ್ತಿದ್ದನು. ಆದರೆ ಪ್ರೀತಿಯ ಮಗ ನಸ್ರು ಮಾತ್ರ ಸಹಿಸಲು ಆಗದಷ್ಟು ಸೋಮಾರಿ. ಅವನ ನಿತ್ಯದ ಕಾಯಕ ಯಾವುದೆಂದರೆ ಹಗಲು, ಇರುಳಿನ ಭೇದವಿಲ್ಲದೆ ನಿದ್ರೆ ಮಾಡುವುದು. ಮಗನ ನಡವಳಿಕೆಯಿಂದ ವ್ಯಾಪಾರಿಗೆ ಬೇಜಾರಾದರೂ, ತನ್ನ ಮಗನ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿರಲಿಲ್ಲ. ತನ್ನ ಮಗನನ್ನು ಒಂದಲ್ಲ ಒಂದು ದಿನ ಮುಲ್ಲಾನನ್ನಾಗಿ ಮಾಡಬೇಕೆಂದು ಕನಸು ಕಾಣುತ್ತಿದ್ದನು. ಮುಲ್ಲಾ ಎಂದರೆ ಉಪಾಧ್ಯಾಯ, ಜ್ಞಾನಿ ಎಂದರ್ಥ. ತನಗೆ ತಿಳಿದಿದ್ದನ್ನು ಬೇರೆಯವರಿಗೆ ಬೋಧಿಸುವ ಕೆಲಸ ಮಾಡುವವನಿಗೆ "ಮುಲ್ಲಾ" ಎಂದು ಕರೆಯುವರು. ಮುಸ್ಲಿಮರ ಶಾಲೆಗಳನ್ನು ಮದರಸಾ ಎಂದು ಕರೆಯುವರು. ಅಂತಹ ಶಾಲೆಯಲ್ಲಿ ಉಪಾಧ್ಯಾಯನಾಗಿ ತನ್ನ ಮಗ ಕೆಲಸ ಮಾಡಲಿ ಎಂದು ವ್ಯಾಪಾರಿ ಕನಸು ಕಾಣುತ್ತಿದ್ದನು. ಅಂತಹ ಕನಸು ಕಾಣುವ ವ್ಯಾಪಾರಿಗೆ ನಿದ್ರೆ ಮಾಡುವ ಮಗ ಜನಿಸಿದ್ದನು. ನಿಜಕ್ಕೂ ಮಗನನ್ನು ಸರಿ ದಾರಿಗೆ ತರುವುದು ಕಷ್ಟವೇ ಸರಿ. ಆದರೆ ಮನಸ್ಸಿದ್ದರೆ ಮಾರ್ಗ. ಮಗನನ್ನು ಸರಿದಾರಿಗೆ ತರಲು ತುಂಬಾ ಸಹನೆ ಬೇಕು ಎಂಬ ಸತ್ಯವನ್ನು ವ್ಯಾಪಾರಿ ಅರಿತುಕೊಂಡಿದ್ದನು.

     ನಸ್ರು ತುಂಬಾ ಸೋಮಾರಿ, ನಿದ್ರೆ ಮಾಡುವವನು ಎಂಬುದನ್ನು ಬಿಟ್ಟರೆ ಓದಿನಲ್ಲಿ ತುಂಬಾ ಚುರುಕು. ಅವನು ಮದರಸಾಗೆ ಪ್ರತಿನಿತ್ಯ ಹಾಜರಾಗಿ ಉಪಾಧ್ಯಾಯರು ಬೋಧನೆ ಮಾಡಿದ್ದನ್ನು ಬಹಳ ಬೇಗ ಕಲಿಯುತ್ತಿದ್ದನು. ಎಲ್ಲಾ ವಿಷಯಗಳು ಅವನ ಚುರುಕು ತಲೆಗೆ ಬೇಗ ಹೋಗುತ್ತಿತ್ತು. ಅಂತಹ ನಸ್ರು ಎಲ್ಲ ಉಪಾಧ್ಯಾಯರಿಗೂ ಪ್ರೀತಿಪಾತ್ರನಾಗಿದ್ದನು. ಅವನು ಎಲ್ಲಾ ವಿಷಯಗಳನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡು ಹಾಸ್ಯ, ವಿಡಂಬನೆ, ವ್ಯಂಗ್ಯದಿಂದ ಅರ್ಥಪೂರ್ಣವಾಗಿ ತನ್ನ ವಾದವನ್ನು ಮಂಡಿಸುತ್ತಿದ್ದನು. ಉಪಾಧ್ಯಾಯರು ಅವನ ಅಸಾಮಾನ್ಯ ಬುದ್ಧಿವಂತಿಕೆಯನ್ನು ಕಂಡು ಹರ್ಷಿಸುತ್ತಿದ್ದರು. ಅವನು ತನ್ನ ಮಿತ್ರವೃಂದದಲ್ಲಿ ಬಹಳ ಹೆಸರುವಾಸಿಯಾಗಿದ್ದರನು.

     ನಸ್ರು ಬಾಲ್ಯದಿಂದ ಯವ್ವನಕ್ಕೆ ಕಾಲಿಟ್ಟನು. ಅವನ ಬುದ್ಧಿವಂತಿಕೆ, ವಾಕ್ ಚಾತುರ್ಯದ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದರು. ಹೀಗೆ ಅವನ ಗುಣಗಾನ ಬಹಳ ಬೇಗ ಟರ್ಕಿ ದೇಶದ ರಾಜನ ಕಿವಿಗೆ ಮುಟ್ಟಿತು. ಬಹಳ ಬೇಗನೆ  ರಾಜನ ಅಂತರಂಗದ ಆಪ್ತನಾದನು. ಅವನಿಗೆ ಅದೃಷ್ಟ, ಹಣ ಎರಡೂ ಸೇರಿ ಅನೇಕ ಮಂದಿ ಶತ್ರುಗಳನ್ನು ಹುಟ್ಟು ಹಾಕಿತು. ಬೇಕಾದಷ್ಟು ಜನ ಅವನನ್ನು ರಾಜನ ಅಂತರಂಗದಿಂದ ದೂರಕ್ಕೆ ತಳ್ಳಲು ಯತ್ನಿಸಿ, ಅನೇಕ ರೀತಿಯ ಸಾಹಸಗಳನ್ನು ಅವನಿಂದ ಮಾಡಿಸಿದರು. ಅಂತಹ ಸಾಹಸದ ಕಥೆಗಳು "ದಂತ ಕಥೆ"ಗಳಾಗಿವೆ. ಇಂದಿನ ಹಾಗೂ ಮುಂದಿನ ಪೀಳಿಗೆಗೆ ಈ ಕಥೆಗಳು ಸೂಕ್ತ ಮಾರ್ಗದರ್ಶನ, ಬುದ್ಧಿಮತ್ತೆಯನ್ನು ಹೆಚ್ಚಿಸುವಲ್ಲಿ ಸಫಲವಾಗುತ್ತವೆ ಎಂದು ಖಚಿತವಾಗಿ ಹೇಳಬಹುದು.

     ನಸ್ರು ಮುಂದೆ ಬಹಳ ಹೆಸರುವಾಸಿಯಾದನು. ಅವನಿಗೆ ಅಪಾರ ಸಂಪತ್ತು ದೊರಕಿತು. ಅಂತಹ ನಸ್ರುದ್ದೀನಿಗೆ ಶತ್ರುಗಳಾದವರು ಒಬ್ಬರು ಇಬ್ಬರಲ್ಲ. ಅವನ ಅತಿ ಬುದ್ಧಿವಂತಿಕೆ, ವ್ಯಂಗ್ಯ, ವಿಡಂಬನೆಗಳಿಂದ ಎಂತೆಂತಹ ಸಮಸ್ಯೆಗಳಿಗೂ ಶೀಘ್ರವಾಗಿ ಉತ್ತರ ಹುಡುಕುತ್ತಿದ್ದನು. ಹೀಗೆ ಅವನ ಜಾಣ್ಮೆ ಎಲ್ಲರ ಮನಸ್ಸನ್ನು ಗೆಲ್ಲಲು ಸಹಕಾರಿ ಎನಿಸಿತು. ಅವನು ಸಾವಿರಾರು ಲಕ್ಷಾಂತರ ಜನರ ಮನದಲ್ಲಿ ನೆಲೆ ನಿಂತಿರುವನು. ಅವನು ತನ್ನ ರಾಜ್ಯದ ರಾಜನಿಗೆ ಮಾತ್ರ ಆಪ್ತನಾಗಿರಲಿಲ್ಲ. ಅವನ ಮಾತುಗಳು ಸಾಮಾನ್ಯ ಮನುಷ್ಯನಿಗೂ ಅರ್ಥವಾಗುತ್ತಿತ್ತು. ಅವನು ಹೇಳಿದ ಮಾತುಗಳು ಮನುಷ್ಯನ ಸಮಸ್ಯೆಗಳಿಗೆ ಉತ್ತರಗಳಾದವು.

     ನಸ್ರುದ್ದೀನ್ ಸಾಹಸದ ಕತೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ಮುಂದೆ ಇಡಲು ಯತ್ನಿಸಿದ್ದೇವೆ. ಅವರ ಕಥೆಗಳನ್ನು ಸರಿಯಾಗಿ ಹೇಳುವ ಮೂಲಕ ನ್ಯಾಯ ಒದಗಿಸಿದ್ದೇವೆ. ಅವರ ಹಾಸ್ಯ, ವ್ಯಂಗ್ಯ, ವಿಡಂಬನೆಗೆ ಕೊನೆ, ಮಿತಿ ಇರಲಿಲ್ಲ. ಅವರ ಹೆಸರು ಹಳ್ಳಿಯ ಮೂಲೆಗಳಿಂದ ಹಿಡಿದು ರಾಜ್ಯದ ರಾಜನ ತನಕ ಹರಡಿತ್ತು. ಅವರ ಬದುಕಿರುವಾಗಲೇ "ದಂತ ಕಥೆ"ಯಾದವರು. ಅವರ ಕಥೆಗಳು ಎಲ್ಲ ಕಾಲಕ್ಕೂ ಸಲ್ಲುವಂತಹುದು.

     ನಸ್ರುದ್ದೀನ್ ಬಾಲಕನಾಗಿದ್ದಾಗ ಸೋಮಾರಿ, ಕೆಲಸ ಕಳ್ಳನಾಗಿದ್ದರೂ ಮುಂದೆ ಕೀರ್ತಿ ಗಳಿಸಿದ ಹಾದಿಯನ್ನು ಮುಂದಿನ ಬ್ಲಾಗ್‌ಗಳಲ್ಲಿ ನೋಡೋಣ.


MULLANASARUDDIN STORIES

Post a Comment

0 Comments