ನಿದ್ದೆಗಣ್ಣಿನ ಬಾಲಕ ನಸ್ರುದ್ದೀನ್ | Sleepy Nasaruddin | Mullanasaruddin Stories
ಈಗಾಗಲೇ ಹೇಳಿರುವಂತೆ ಬಾಲಕ ನಸ್ರುದ್ದೀನ್ ಬಹಳ ಸೋಮಾರಿ, ನಿದ್ರೆ ಮಾಡುತ್ತಿದ್ದವನು. ಅಂತಹ ಬಾಲಕನನ್ನು ತಂದೆ ಹೇಗಾದರೂ ಮಾಡಿ ಮುಲ್ಲಾನನ್ನಾಗಿ ಮಾಡಲು ಬಯಸಿದರು. ಆದರೆ ಬಾಲಕ ಬೆಳಗ್ಗೆ ಸೂರ್ಯ ನೆತ್ತಿಯ ಮೇಲೆ ಬಂದರು ಕಣ್ಣು ಬಿಡುತ್ತಿರಲಿಲ್ಲ. ಶಾಲೆಗೆ ಹೋಗಲು ನಸ್ರು ಒಪ್ಪಿಕೊಂಡರು ಮುಂಜಾನೆ ಬೇಗ ಏಳುತ್ತಿರಲಿಲ್ಲ. ಅಂತಹ ಮಗನನ್ನು ಎಬ್ಬಿಸಲು ತಂದೆ ತುಂಬಾ ಕಷ್ಟಪಡುತ್ತಿದ್ದರು. ಅವನ ತಂದೆ ಮುಂಜಾನೆ ಬೇಗನೆ ಎದ್ದು ವಾಯುವಿಹಾರಕ್ಕೆ ಹೊರಡುತ್ತಿದ್ದರು. ಬಾಲಕ ಮಾತ್ರ ಮುಸುಕು ಹಾಕಿ ಮಲಗುತ್ತಿದ್ದನು. ಅವನನ್ನು ಎಬ್ಬಿಸಲು ಶತ ಪ್ರಯತ್ನಪಟ್ಟರೂ ಪುಣ್ಯಾತ್ಮ ಏಳುತ್ತಿರಲಿಲ್ಲ.
storieskannada1 |
ಹೀಗಿರಲು ಒಂದು ದಿನ ನಸ್ರು ತಂದೆ ಮುಂಜಾನೆ ಪ್ರತಿನಿತ್ಯದಂತೆ ಎದ್ದು ವಾಯುವಿಹಾರಕ್ಕೆ ಹೊರಟರು. ಸೂರ್ಯನು ಪೂರ್ವದಲ್ಲಿ ಉದಯಿಸುತ್ತಿರುವ ಸುಂದರ ಸಮಯ. ರವಿಯ ಹೊಂಗಿರಣಗಳು ಭೂಮಿಯನ್ನು ಸ್ಪರ್ಶಿಸಿ, ಪೃಥ್ವಿಯ ಒಳಗಿರುವ ಹುಳುಗಳನ್ನು ಹೊರಬರುವಂತೆ ಮಾಡುವ ದಿವ್ಯ ಕ್ಷಣ. ಅಂತಹ ಸುಂದರ ದೃಶ್ಯವನ್ನು ನೋಡುವ ಕಣ್ಣುಗಳು ನಿಜಕ್ಕೂ ಪುಣ್ಯ ಮಾಡಿದ್ದವು. ಮರದಲ್ಲಿ ಅಡಗಿ ಕುಳಿತಿರುವ ಹಕ್ಕಿಗಳ ಕಲರವ, ಚಿಲಿಪಿಲಿ ಗಾನವನ್ನು ಆಲಿಸಲು ಅಮಾಯಕ ಹುಳು ಉಪ್ಪಟ್ಟೆಗಳು ಹೊರಬಂದವು. ಆಗ ಒಂದು ಸೋಜಿಗ ವಿಸ್ಮಯ ಎನ್ನುವಂತಹ ಘಟನೆ ನಡೆಯಿತು. ಭೂಮಿಯಿಂದ ಹೊರ ಬಂದ ಹುಳುಗಳನ್ನು ಹಕ್ಕಿ ಹಿಡಿದು ತಿಂದಿತು. ನಿಜಕ್ಕೂ ಒಳ್ಳೆಯ ಸಕಾರಾತ್ಮಕ ಘಟನೆ! ಯಾರು ಬೇಗ ಎದ್ದು ತಮ್ಮ ಕರ್ತವ್ಯಗಳನ್ನು ಪೂರೈಸುವರೋ ಅಂತಹವರು ಜೀವನದಲ್ಲಿ ಶ್ರೀಮಂತರಾಗಿಬಾಳುವರು. ಶ್ರೀಮಂತಿಕೆ ಎಂದರೆ ಹಣದ ಶ್ರೀಮಂತಿಗೆ ಮಾತ್ರವಲ್ಲ, ಬೇಗ ಎದ್ದರೆ ಮನಸ್ಸು, ದೇಹ ಎರಡೂ ಉಲ್ಲಾಸವಾಗಿರುತ್ತವೆ. ಆಗ ಕೆಲಸದ ಮೇಲೆ ಶ್ರದ್ಧೆ ಇರುವುದು.
ನಸ್ರುದ್ದೀನನ ತಂದೆ ತನ್ನ ಮಗನಲ್ಲಿ ಬದಲಾವಣೆ ಉಂಟು ಮಾಡಬೇಕೆಂದು ತೀವ್ರವಾಗಿ ಪಣತೊಟ್ಟನು. ಆತ ಮಗನಿಗೆ ಮುಂಜಾನೆಯ ಸೂರ್ಯನನ್ನು ತೋರಿಸಲು ಮನೆಯಲ್ಲಿ ನಿದ್ರೆ ಮಾಡುತ್ತಿರುವ ಮಗನನ್ನು ಎಬ್ಬಿಸಿಕೊಂಡು ಬರಬೇಕು ಎಂದು ತೀರ್ಮಾನಿಸಿ ತನ್ನ ವಾಯುವಿಹಾರವನ್ನು ಮೊಟಕುಗೊಳಿಸಿ ಹಿಂದಿರುಗುತ್ತಿದ್ದನು. ಹಾಗೆ ಹಿಂತಿರುಗುತ್ತಿರುವಾಗ ಒಂದು ವಿಸ್ಮಯಗೊಳಿಸುವಂಥ ಘಟನೆ ನಡೆಯಿತು.
ನಸ್ರುದ್ಧೀನನ ತಂದೆಗೆ ದಾರಿಯಲ್ಲಿ ಚಿಕ್ಕ ಮೂಟೆ ಸಿಕ್ಕಿತು. ಆತನು ಕುತೂಹಲದಿಂದ ಮೂಟೆಯನ್ನು ಬಿಚ್ಚಿ ನೋಡಿದನು. ಅದರಲ್ಲಿ ಫಳಫಳಿಸುವ ಚಿನ್ನದ ನಾಣ್ಯಗಳು ಕಂಡವು. ಆತನು ತುಂಬಾ ಪ್ರಾಮಾಣಿಕ ವ್ಯಕ್ತಿ. ಚಿನ್ನದ ನಾಣ್ಯದ ಒಡೆಯನಿಗಾಗಿ ಅವನ ಕಣ್ಣುಗಳು ಹುಡುಕಾಡಿದವು. ಆದರೆ ಅಲ್ಲಿ ಯಾರೂ ಇರಲಿಲ್ಲ. ಅವನು ಮೂಟೆಯನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡು ಮನೆಗೆ ಆತುರಾತುರವಾಗಿ ಬಂದನು. ತನ್ನ ಮಗನಿಗೆ ನಡೆದ ಘಟನೆಗಳ ಬಗ್ಗೆ ತಿಳಿಸಿ ಹೇಳಿ ನಿದ್ರೆ, ಸೋಮಾರಿತನವನ್ನು ಹೋಗಲಾಡಿಸಬೇಕು ಎಂದು ಯೋಚಿಸುತ್ತಾ ಮನೆಯ ಒಳಗೆ ಕಾಲಿಟ್ಟನು. ತಾನು ಕಂಡ ದೃಶ್ಯವನ್ನು ಹೇಳುವುದರಿಂದ ತನ್ನ ಮಗನ ವರ್ತನೆ ಬದಲಾಗಬಹುದು ಎಂದು ನಸ್ರುದ್ಧೀನನ ತಂದೆ ಭಾವಿಸಿದರು. ಆದರೆ ಮಗ ತುಂಬಾ ಬುದ್ಧಿವಂತನಲ್ಲವೇ? ಅವನು ತಂದೆಗೆ ನೀಡಿದ ಉತ್ತರವನ್ನು ಮುಂದೆ ಕೇಳಿ.
"ಮಗನೇ ! ಬೇಗ ಏಳು. ನಿನಗೆ ನಾನು ಒಂದು ವಿಷಯವನ್ನು ತಿಳಿಸಬೇಕು. ಏಳು ಬೇಗ ಎದ್ದೇಳು". ತಂದೆ ಕೂಗಿದರೂ ಮಲಗಿದ್ದ ಸೋಮಾರಿ ಮಗ ಮಾತ್ರ ಮಿಸುಕಾಡಲಿಲ್ಲ. ಅವನನ್ನು ಎಬ್ಬಿಸಲು ದಾರಿ ತಿಳಿಯದೇ ತಂದೆಯು ಒಂದು ಪಾತ್ರೆಯಲ್ಲಿ ತಣ್ಣಗಿರುವ ನೀರನ್ನು ತಂದು ಮಗನ ಮುಖದ ಮೇಲೆ ಸಿಂಪಡಿಸಿದನು. ಆಗ ನಸ್ರುದ್ಧೀನ್ ದಡಬಡಿಸಿ ಎದ್ದನು. ಅವನು ತನ್ನ ಮುಖದ ಮೇಲೆ ಬಿದ್ದ ನೀರನ್ನು ಒರೆಸಿಕೊಂಡು ತಂದೆಯ ಕಡೆಗೆ ಬೇಸರದಿಂದ ನೋಡಿದನು. "ಅಪ್ಪಾ! ನೀವು ಮಾಡಿದ ಕೆಲಸ ಸರಿಯಾಗಿದೆಯೇ? ಮಲಗಿರುವ ನನ್ನ ಮುಖದ ಮೇಲೆ ನೀರನ್ನು ಎರಚುವುದು ಯಾವ ನ್ಯಾಯ?" ಮಗನ ಉತ್ತರವನ್ನು ಕೇಳಿ ತಂದೆಗೆ ಕೋಪ ಬಂದರೂ ಸಾವರಿಸಿಕೊಂಡು "ಮಗನೇ ! ನೀನು ಸದಾಕಾಲ ಮಲಗಿ ನಿದ್ರಿಸುವುದು ಸರಿಯೇ? ನಾನು ಇಂದು ಮುಂಜಾನೆ ಕಂಡ ದೃಶ್ಯವನ್ನು ವಿವರಿಸುವ ಸಲುವಾಗಿ ನಿನ್ನನ್ನು ಎಬ್ಬಿಸಿದೆ. ನನ್ನ ಮಾತನ್ನು ಕೇಳಿದರೆ ನಿನಗೆ ಮುಂಜಾನೆ ಬೇಗ ಏಳುವುದರಿಂದ ಉಂಟಾಗುವ ಲಾಭದ ಅರಿವು ತಿಳಿದುಬರುವುದು" ಎಂದನು.
"ಅಪ್ಪಾ ! ನೀವು ಹೇಳಿದ ಪಾಠ ನನಗೆ ರುಚಿಸಲಿಲ್ಲ. ನಾನು ನಿಮ್ಮ ಮಾತುಗಳನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಹುಳುಗಳು ಬೇಗ ಎದ್ದು ಸೂರ್ಯನ ರಶ್ಮಿಗೆ ಹೊರಬರುವುದರಿಂದ ಹಕ್ಕಿಗಳು ತಿಂದು ಹಾಕುತ್ತವೆ. ಅವು ಬೇಗ ಎದ್ದು ಹೊರಬರದಿದ್ದರೆ ಹಕ್ಕಿಗಳು ತಿನ್ನುತ್ತಿರಲಿಲ್ಲ ಅಲ್ಲವೇ? ನೀನು ಬೇಗ ಎದ್ದು ಹೋಗಿದ್ದರಿಂದ ನಿನಗೆ ಬೇರೆಯವರ ಸ್ವತ್ತು ದೊರಕಿತು. ನಿನಗಿಂತ ಬೇಗ ಎದ್ದು ಹೊರಟವನು ತನ್ನ ಚಿನ್ನದ ನಾಣ್ಯಗಳನ್ನು ಕಳೆದುಕೊಂಡನು. ಅವನು ನಿಧಾನವಾಗಿ ಎದ್ದು ಹೊರಟಿದ್ದರೆ ಹೀಗೆ ಆಗುತ್ತಿರಲಿಲ್ಲ ಅಲ್ವೇ? ಈಗ ಅವನು ತನ್ನ ಹಣವನ್ನು ಕಳೆದುಕೊಂಡು ಎಲ್ಲಿ ತಲೆಯ ಮೇಲೆ ಕೈಯಿಟ್ಟುಕೊಂಡು ಅಳುತ್ತಿದ್ದಾನೆಯೋ? ಅವನು ತನ್ನ ಹಣವನ್ನು ಬೇಗ ಏದ್ದಿದ್ದರಿಂದಲೇ ಕಳೆದುಕೊಂಡನು. ಹೀಗೆ ಪ್ರತಿ ಬಾರಿಯೂ ಬೇಗ ಏಳುವುದರಿಂದ ಒಳ್ಳೆಯದಾಗಬಹುದು ಎಂದು ನನಗೆ ಅನಿಸುತ್ತಿಲ್ಲ".
ನಸ್ರುದ್ದೀನ್ ಮಾತುಗಳನ್ನು ಕೇಳಿ ತಂದೆಯ ಬಾಯಿಂದ ಮಾತುಗಳು ಹೊರಡಲಿಲ್ಲ. ಆತನು ಮೂಕನಾದನು. ನಸ್ರುದ್ಧೀನ್ ಮಾತ್ರ ತನ್ನ ದಿಂಬನ್ನು ಕವಚಿಕೊಂಡು ಪುನಃ ಮಲಗಲು ಅನುವಾದನು. ತಂದೆಯೂ ಮಗನ ಕಡೆಗೆ ನಿರತ್ತರನಾಗಿ ನೋಡಿದನು. ತಂದೆಯ ತರ್ಕವನ್ನು ತನ್ನ ಅತಿ ಬುದ್ಧಿವಂತಿಕೆಯಿಂದ ನಸ್ರುದ್ಧೀನ್ ಸೋಲಿಸಿದನು. ಮಗನ ಮಾತಿಗೆ ಯಾವ ರೀತಿಯ ಉತ್ತರ ಹೇಳಬೇಕೋ ತಿಳಿಯದೆ ತಂದೆ ಮಾತ್ರ ಮಾತು ಬಾರದವನಂತೆ ಮೌನವಾದರು.
ಇದೇ ರೀತಿಯ ಇನ್ನಷ್ಟು ಕಥೆಗಳನ್ನು ಓದಲು, ಅಪ್ಡೇಟ್ಸ್ ಪಡೆಯಲು, ನಮ್ಮನ್ನು Instagramನಲ್ಲಿ ಫಾಲೋ ಮಾಡಿ.
Post a Comment
0 Comments